ಔಷಧಮಂಜರಿ: ಒಂದು ದೇಶಕ್ಕೆ ಅನ್ವಯಿಸುವಂತೆ ಮದ್ದುಗಳನ್ನು ಗುರುತಿಸುವ ಶಿಷ್ಟಮಾನಕಗಳನ್ನೂ ಮದ್ದುಗಳ ಗುಣಮಟ್ಟ, ಪ್ರಮಾಣಗಳನ್ನೂ ನಿಗದಿಯಾಗಿ ಸೂಚಿಸುವ ಪುಸ್ತಕ (ಫಾರ್ಮಕೋಪಿಯ). ಸರಕಾರದ ಅಧಿಕೃತ ಸಮಿತಿ ಇಲ್ಲವೇ ಸರಕಾರ ಒಪ್ಪಿದ ಸಂಘ ಪ್ರಕಟಿಸುವ, ಕಾನೂನುಬದ್ಧವಾಗುವ ಪುಸ್ತಕವಿದು. ಯಾರೇ ಆಗಲಿ ಮದ್ದುಗಳನ್ನು ಬಳಸುವಾಗ ಅದಕ್ಕಾಗಿ ನಿಯಮಿತವಾಗಿರುವ ಗುಣಮಟ್ಟ, ಪ್ರಮಾಣಗಳ ಮದ್ದುಗಳನ್ನು ಪಟ್ಟಿಯಲ್ಲಿ ವಿವರಿಸುವುದೇ ಔಷಧಮಂಜರಿಯ ಮುಖ್ಯ ಗುರಿ. ಇದರಲ್ಲಿ ಹೇಳಿರುವ ಗುಣಮಟ್ಟಕ್ಕೆ ಬರುವ ಮದ್ದುಗಳನ್ನು ಗುರುತಿಸಲು ಆಯಾ ದೇಶದ ಔಷಧಮಂಜರಿಯ ಹೆಸರನ್ನು ಮದ್ದುಗಳಿಗೆ ಜೋಡಿಸುವುದುಂಟು. ಅಮೊನಿಯಂ ಕಾರ್ಬೊನೇಟ್, ಐ.ಪಿ.(ಫಾರ್ಮಕೋಪಿಯ ಆಫ್ ಇಂಡಿಯ), ಅಮೊನಿಯ ಕಾರ್ಬೊನೇಟ್, ಬಿ.ಪಿ (ಬ್ರಿಟಿಷ್ ಫಾರ್ಮಕೋಪಿಯ) ಇತ್ಯಾದಿ. ಮದ್ದುಗಳಾಗಿ ಬಳಕೆಗೆ ಬರುವ ವಸ್ತುಗಳನ್ನು ಗುರುತಿಸಲೂ ಗುಣಮಟ್ಟ ನಿರ್ಧರಿಸಲೂ ರಾಸಾಯನಿಕ ಭೌತಜೀವಿಗಳ ಮೇಲಿನ ಪರೀಕ್ಷೆಗಳು, ಕೆಲವು ಮಿಶ್ರಣಗಳ ವಿವರಗಳೂ ಇವೆ. ಔಷಧಮಂಜರಿಯಲ್ಲಿ ಮದ್ದುಗಳ ವರ್ತನೆಯಾಗಲಿ, ಅವುಗಳ ವಿಷವೇರಿಕೆಯ ವಿಷಯವಾಗಲಿ ಸಿಕ್ಕದು. ಔಷಧಗಳನ್ನು ತಯಾರಿಸುವವರೂ ಮಾಡಿ ಕೊಡುವವರೂ ಆಯಾ ದೇಶದಲ್ಲಿ ಜಾರಿಯಲ್ಲಿರುವ ಹೊಸ ಅಧಿಕೃತ ಔಷಧಮಂಜರಿಯಲ್ಲಿರುವುದನ್ನು ಕಾನೂನುಬದ್ಧವಾಗಿ ಆಚರಿಸುವುದು ಕಡ್ಡಾಯವಿದೆ. ಜನರಿಗೆ ವಿಷಕರ ಕೆಟ್ಟ, ಕಳಪೆ ಮದ್ದುಗಳನ್ನು ಕೊಡದಿರುವುಂತೆ ಮಾಡುವುದೇ ಇದರ ಮುಖ್ಯ ಉದ್ದೇಶ. 

ಸಾಮಾನ್ಯವಾಗಿ ಜನರ ಒಳಿತಿಗಾಗಿ ದುಡಿವ ಒಂದು ಸಂಸ್ಥೆ ಇಲ್ಲವೇ ಸಮಿತಿ ಔಷಧಮಂಜರಿಯ ಪ್ರಕಟಣೆಯ ಭಾರವನ್ನು ಹೊತ್ತುಕೊಂಡು ವೈದ್ಯ, ರಸಾಯನ, ಔಷಧಗಾರಿಕೆ, ಔಷಧ ತಯಾರಿಕೆ ವಿಜ್ಞಾನಗಳಲ್ಲಿ ಪರಿಣತರಾದವರ ನೆರವಿನಿಂದ ಅದನ್ನು ಪ್ರಕಟಿಸುವುದು. ಭಾರತದಲ್ಲಿರುವಂತೆ, ಬಹಳ ದೇಶಗಳಲ್ಲಿ ಸರ್ಕಾರವೇ ಒಂದು ಅಧಿಕೃತ ಸಮಿತಿಯ ಮೂಲಕ ಈ ಕೆಲಸದ ಜವಾಬ್ದಾರಿಯನ್ನು ಕೈಗೊಳ್ಳುತ್ತದೆ. ಆದರೆ ಬ್ರಿಟನ್ ಮತ್ತು ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಸರ್ಕಾರದ ಒಪ್ಪಿಗೆ ಪಡೆದ ಖಾಸಗಿ ಸಂಘಗಳು ಇದನ್ನು ಲಾಭವಿಲ್ಲದೆ ಪ್ರಕಟಿಸುತ್ತದೆ. ಇವನ್ನು ಮಾರಿ ಬಂದ ಆದಾಯದಿಂದ ತಿದ್ದುಪಡಿಗಳ ಪ್ರಕಟಣೆ ಕೆಲಸಗಳಿಗೆ ಹಣ ಒದಗುವುದು. ತಿದ್ದುಪಡಿಯಾದಾಗ ಹಳೆಯ ಕೆಲವು ಔಷಧಗಳನ್ನು ಮಂಜರಿಯಿಂದ ತೆಗೆದುಹಾಕಿ ಕೆಲವು ಹೊಸವನ್ನು ಸೇರಿಸಲಾಗುವುದು.

ಔಷಧಮಂಜರಿಯ ರೂಪದಲ್ಲಿ ದೊರತಿರುವ ತೀರ ಪುರಾತನ ಕಾಲದ ದಾಖಲೆಯೆಂದರೆ ಪ್ರ.ಶ.ಪು. ಸು. 1700ರಲ್ಲಿ ಕೆತ್ತಿರಬಹುದಾದ ಪುರಾತನ ಬ್ಯಾಬಿಲೋನಿಯದ ಕಲ್ಲುಬಿಲ್ಲೆ. ಯುರೋಪಿನಲ್ಲಿ ನಿಜವಾದ ಔಷಧಮಂಜರಿ ಮೊದಲು ಬಂದುದು ಫ್ಲಾರೆಂಟೇನಿನದು (1498). ಅಧಿಕೃತವಾಗಿ ಸರ್ಕಾರದ ವತಿಯಿಂದ ಮೊಟ್ಟಮೊದಲು (1542) ಪ್ರಕಟಿಸಿದವ ವೆಲೇರಿಯಸ್ ಕಾರ್ಡಸ್. ಈಗಿರುವಲ್ಲಿ ಬಲು ಹಳೆಯದು ಡೇನರದು (1772). ಲಂಡನ್ನಲ್ಲಿ 1618ರಲ್ಲೂ ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ 1821ರಲ್ಲೂ ಭಾರತದಲ್ಲಿ 1958ರಲ್ಲೂ ಔಷಧಮಂಜರಿಗಳು ಮೊದಲು ಪ್ರಕಟವಾದುವು. ಬೇರೆ ಬೇರೆ ದೇಶಗಳಲ್ಲಿ ಜಾರಿಯಲ್ಲಿರುವ ಔಷಧಮಂಜರಿಗಳಿವು; ಅಮೆರಿಕದ ಸಂಯುಕ್ತಸಂಸ್ಥಾನಗಳು 1955. ಆರ್ಜಂಟೀನ (1957), ಆಸ್ಟ್ರಿಯ (1906), ಭಾರತ (1968), ಇಟಲಿ (1940), ಈಜಿಪ್ಟ್‌ (1953), ಗ್ರೀಸ್ (1924), ಚಿಲಿ (1941), ಚೀನ (1953), ಚೆಕೋಸ್ಲೊವಾಕಿಯ (1958), ಜಪಾನ್ (1951), ಜರ್ಮನಿ (1951), ಡೆನ್ಮಾರ್ಕ್ (1954), ಟರ್ಕಿ (1948), ನಾರ್ವೆ (1953), ನೆದರ್ಲೆಂಡ್ಸ್‌ (1958), ಪರಗ್ವೆ (1945), ಪೋರ್ಚುಗಲ್ (1946), ಪೋಲೆಂಡ್ (1954), ಫ್ರಾನ್ಸ್‌ (1954), ಫಿನ್ಲೆಂಡ್ (1956), ಬ್ರಿಟನ್ (1969), ಬೆಲ್ಜಿಯಂ (1953), ಬ್ರೆಜಿûಲ್ (1947), ಮೆಕ್ಸಿಕೊ (1952), ಯುಗೋಸ್ಲಾವಿಯ (1951), ರಷ್ಯ, ರೂಮೇನಿಯ (1952), ವೆನಿಜೇ಼್ವಲ (1942), ಸ್ಪೇನ್ (1954), ಸ್ವೀಡನ್ (1946), ಹಂಗರಿ (1954). ತಮ್ಮ ದೇಶದ್ದೇ ಬೇರೆ ಒಂದು ಔಷಧಮಂಜರಿ ಇಲ್ಲವಾದರೆ ಅಂಥ ನಾಡುಗಳು ನೆರೆಯ ದೇಶದ್ದನ್ನೋ ಅಂತಾರಾಷ್ಟ್ರೀಯವಾದದ್ದನ್ನೋ ಅನುಸರಿಸಬಹುದು. ಇಥಿಯೋಪಿಯ, ಇಸ್ರೇಲುಗಳು ಅಂತಾರಾಷ್ಟ್ರೀಯವಾದದ್ದನ್ನು ಅನುಸರಿಸುತ್ತವೆ.

ಒಂದು ದೇಶದಲ್ಲಿ ಮದ್ದುಗಳ ಗುಣಮಟ್ಟ ಹೇಗಿರಬೇಕೆಂದು ನಿರ್ಧರಿಸಲು ಮೂಲಾಧಾರ ಈ ಔಷಧಮಂಜರಿಯೇ. ಆಯಾ ದೇಶದ ವೈದ್ಯಗಾರಿಕೆ, ಔಷಧಗಾರಿಕೆ, ಜನಾರೋಗ್ಯಗಳು ಇದರಲ್ಲಿ ಸೂಚಿಸಿರುವ ಗುಣಮಟ್ಟಗಳನ್ನವಲಂಬಿಸಿವೆ. ಆದರೆ ಕೆನಡದಂಥ ದೇಶವನ್ನು ಬಿಟ್ಟು ಉಳಿದಡೆಗಳಲ್ಲಿ ಗುಣಮಟ್ಟಗಳನ್ನು ನಿರ್ಧರಿಸುವವರೇ ಬೇರೆ. ಅವು ಜಾರಿಯಲ್ಲಿ ಬಂದು ಎಲ್ಲರೂ ಪಾಲಿಸುವಂತೆ ನೋಡಿಕೊಳ್ಳುವವರೇ ಬೇರೆ. ಕರ್ನಾಟಕ ರಾಜ್ಯದಲ್ಲಿರುವ ಹಾಗೆ ಭಾರತದ ಇತರೆಡೆಗಳಲ್ಲೂ ಔಷಧ ಹತೋಟಿ ತನಿಖಾಧಿಕಾರಿಗಳು (ಡ್ರಗ್ ಕಂಟ್ರೋಲ್ ಇನ್ಸ್ಪೆಕ್ಟರ್ಸ್) ನೇಮಕವಾಗಿರುವರು. ಔಷಧಗಳು ಮತ್ತು ಅಂಗರಾಗಗಳ ಕಾನೂನುಗಳ ರೀತಿ ಸರಿಯಾದ ಗುಣಮಟ್ಟದ ಮದ್ದುಗಳು ಕೆಡದಂತೆ ದಾಸ್ತಾನಿವೆಯೇ, ವೈದ್ಯನ ನಿಯಮಚೀಟಿಗಳಿಗೆ ಸರಿಯಾಗಿ ಮದ್ದು ವಿಲೇವಾರಿ ಆಗುವುದೇ ಮುಂತಾದವನ್ನು ನೋಡಿಕೊಳ್ಳುವುದೇ ಔಷಧ ಹತೋಟಿ ತನಿಖೆಯ ಇಲಾಖೆಯ ಮುಖ್ಯ ಕೆಲಸಗಳು. ಔಷಧಗಾರರು ಮಾರಾಟಕ್ಕಾಗಿ ಇಟ್ಟುಕೊಂಡಿರುವ ಮದ್ದುಗಳ ಮಾದರಿಗಳನ್ನು ಆಗಿಂದಾಗ್ಗೆ ತೆಗೆದುಕೊಂಡು ಹೋಗಿ, ಸೀಸೆಗಳ ಮೇಲೆ ನಮೂದಿಸಿರುವ ಮದ್ದು, ಪ್ರಮಾಣಗಳಂತೆ ಒಳಗಿರುವುದೇ ಎಂದು ಇವರು ಪ್ರಯೋಗಾಲಯಗಳಲ್ಲಿ ಪರೀಕ್ಷಿಸುವರು. ಇವುಗಳಲ್ಲಿ ಹೊಂದಾಣಿಕೆ ಇಲ್ಲವಾದರೆ ಕಾನೂನಿಗೆ ತಕ್ಕಂತೆ ಅಪರಾಧದ ತಕ್ಸೀರು ಹಾಕಬೇಕಾಗುತ್ತದೆ. ಈ ತೆರನ ಹತೋಟಿ ಕಾನೂನುಗಳು ಕೆಲವು ಔಷಧಗಳ ವಿಷಯದಲ್ಲಿ ಒಂದೊಂದು ದೇಶದಲ್ಲೂ ಒಳರಾಜ್ಯಗಳಲ್ಲೂ ಬಗೆಬಗೆಯಾಗಿರುವುವು. ಒಂದು ಮದ್ದನ್ನು ರೋಗಿ ಬೇರೆ ಬೇರೆ ದೇಶಗಳಲ್ಲಿ ಕೊಂಡು ಬಳಸಬೇಕಾದರೆ ಹಲಬಗೆಯ ಗುಣಮಟ್ಟಗಳ ಮದ್ದನ್ನು ಕೊಳ್ಳಬೇಕಾಗುವುದೊಂದು ತೊಡಕೇ ಸರಿ. ಇನ್ಸುಲಿನ್ ಒಂದು ಒಳ್ಳೆಯ ಉದಾಹರಣೆ. ಗುಣಮಟ್ಟ ಹೆಚ್ಚುಕಡಿಮೆಯಾದರೆ ರೋಗಿಯ ಪ್ರಾಣಕ್ಕೆ ಊನವಾಗಬಹುದು. ಪ್ರಾಣಿಗಳಿಂದ ಪಡೆದ ಇನ್ಸುಲಿನ್ನನ್ನು ಮೊದಲು ಮೊಲ, ಚಿಟ್ಟಿಲಿಗಳಿಗೆ ಕೊಟ್ಟು ಶಿಷ್ಟೀಕರಣ ಮಾಡಿ ನಿರ್ಧರಿಸಬೇಕು. ಶೀತಕದಲ್ಲಿ ತಣ್ಣಗಿರಿಸದಿದ್ದಲ್ಲಿ ಅದು ಬೇಗನೆ ಕೆಡುತ್ತದೆ. ಆದರೆ ಇನ್ಸುಲಿನ್ ವಿಚಾರದಲ್ಲಿ ಅಂತಾರಾಷ್ಟ್ರೀಯ ಶಿಷ್ಟಪ್ರಮಾಣಗಳು ಇರುವುದರಿಂದ ಅಂಥ ಭಯವಿಲ್ಲ. 

ಪ್ರಪಂಚದಲ್ಲಿ ಹಲವಾರು ದೇಶಗಳಲ್ಲಿ ಮದ್ದುಗಳ ಹೆಸರುಗಳು, ಗುಣಮಟ್ಟಗಳು ಲೆಕ್ಕವಿಲ್ಲದಷ್ಟಿವೆ. ಕೆಲವು ಮದ್ದುಗಳಿಗೆ 15-20 ಹೆಸರುಗಳಿರುವುದೂ ಹೆಚ್ಚಲ್ಲ. ಮದ್ದುಗಳ ಹೆಸರುಗಳನ್ನು ಸಾಮಾನ್ಯೀಕರಿಸುವುದರೊಂದಿಗೆ ಟಿಂಕ್ಚರುಗಳ ಮತ್ತು ಊರಿದ ಸಾರಗಳ (ಇನ್ಫ್ಯೂಷನ್ಸ್‌) ಗುಣಮಟ್ಟವನ್ನಾದರೂ ಶಿಷ್ಟೀಕರಿಸಲು ಮೊಟ್ಟಮೊದಲಾಗಿ ಬ್ರಸೆಲ್ಸ್‌ ಒಪ್ಪಂದವಾಯಿತು (1906). ಇದನ್ನು ವಿಸ್ತರಿಸಿ ಬಳಕೆಯಲ್ಲಿರುವ ಇನ್ನಷ್ಟು ಮದ್ದುಗಳಿಗೆ ಮುಂದೆ (1925). ಅನ್ವಯಮಾಡಲಾಗಿದೆ. ಈ ದಿಸೆಯಲ್ಲಿ ರಾಷ್ಟ್ರಗಳ ಒಕ್ಕೂಟದ (ಲೀಗ್ ಆಫ್ ನೇಷನ್ಸ್‌) ಯತ್ನ ಕೈಗೂಡಲಿಲ್ಲ. ಆದರೆ ಇದರ ಜಾಗಕ್ಕೆ ಬಂದ ವಿಶ್ವಸಂಸ್ಥೆಯ ವಿಶ್ವಆರೋಗ್ಯ ಸಂಸ್ಥೆ ಪುರವಣಿಯೂ (1958) ಹೊರಬಂದಿದೆ. ಇದು ಇಂಗ್ಲಿಷ್, ಫ್ರೆಂಚ್, ಸ್ಪಾನಿಷ್ ನುಡಿಗಳಲ್ಲಿದೆ.	(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ